ಕನ್ನಡ ನಾಡು | Kannada Naadu

  ಹರಿಭಕ್ತರು ಹಾಗೂ ಸಾಧಕರಿಗೆ ಈ ಎರಡೂ ದಿನಗಳಂದು ಶ್ರೀಹರಿಯನ್ನು ಸ್ಮರಿಸಿ, ದರ್ಶಿಸಿ, ಅರ್ಚಿಸಿ, ಪೂಜಿಸಿ, ಸಾಧನೆ ಮಾಡಿಕೊಳ್ಳಲು ಅತ್ಯಂತ ಉತ್ತಮವಾದ ಪರ್ವಕಾಲ.

10 Jan, 2025

 


  ಏಕಾದಶಿ ಶ್ರೀಮಹಾವಿಷ್ಣುವಿಗೆ ಅತ್ಯಂತ ಪ್ರಿಯವಾದ ದಿನ. ಅದರಲ್ಲೂ ಪುತ್ರದಾ ಏಕಾದಶಿ ಎಂದು ಕರೆಸಿಕೊಳ್ಳುವ ವೈಕುಂಟ ಏಕಾದಶಿ ಮಹೋನ್ನತವಾದ ದಿನ. ಈ ದಿನ‌ ಉಪವಾಸವಿದ್ದು, ಶ್ರೀಹರಿಯನ್ನು ಸೇವಿಸಿದರೆ ಒಳಿತು ಎನ್ನುತ್ತವೆ ಪುರಾಣಗಳು.
  ಉಪವಾಸವೆಂದರೆ ಊಟ ಮಾಡದಿರುವುದಷ್ಟೇ ಅಲ್ಲ. ಉಪ ಎಂದರೆ ಹತ್ತಿರ, ವಾಸ ಎಂದರೆ ಇರುವುದು. ಈ ದಿನ ಭಗವಂತನ ಬಳಿಯಲ್ಲಿಯೇ ಇದ್ದು, ಅವನನ್ನು ನಿರಂತರ ಸ್ಮರಿಸಿ, ಅರ್ಚಿಸಿ, ಆನಂದಿಸಬೇಕು.‌ ಇದರೊಟ್ಟಿಗೆ ಏನೂ ಸೇವಿಸದ ಖಾಲಿ ಹೊಟ್ಟೆಯಲ್ಲಿ ಶ್ರೀಹರಿಯ ತೀರ್ಥವನ್ನು ಸೇವಿಸಿದರೆ ಒಳಿತು. ಹಾಗಾಗಿ ಏಕಾದಶಿಯಂದು ಉಪವಾಸ ಕ್ಕೆ ಹೆಚ್ಚಿನ ಮಹತ್ವವಿದೆ.

 ಉಪವಾಸ ಏಕೆ:  ಆಯುರ್ವೇದದ ಪ್ರಕಾರ ಮಾನವನ ಆರೋಗ್ಯಕ್ಕೆ ಉಪವಾಸ ಅತಿ ಸೂಕ್ತವಾದುದು. "ಲಂಘನಂ ಪರಮೌಷಧಂ" ಎನ್ನುವಂತೆ, ನಾವು ಆಹಾರ ಸೇವಿಸದೆ ಇದ್ದ ದಿನ ಹೊಟ್ಟೆಯೊಳಗೆ ನಿತ್ಯ ಚಟುವಟಿಕೆಯಿಂದ ಕೆಲಸ ಮಾಡುವ ಅಂಗಾಂಗಗಳಿಗೆ ತುಸು ವಿರಾಮ ದೊರೆಯುತ್ತವೆ. ಸದಾ ಆಹಾರವನ್ನು ಅರೆಯುವ ಹಲ್ಲುಗಳು, ಆಸ್ವಾದಿಸುವ ನಾಲಿಗೆ, ಜೀರ್ಣ ಪ್ರಕ್ರಿಯೆ ನಡೆಸುವ ಜಠರ, ಜೀರ್ಣವಾದ ಆಹಾರದಲ್ಲಿನ ಸತ್ವವನ್ನು ದೇಹಕ್ಕೆ ಪೂರೈಸುವ ವಿಲ್ಲೈಗಳು, ಪಚನಕ್ರಿಯೆ ನಡೆಸಿ ಮಲೀನವನ್ನು ಹೊರ ಹಾಕುವ ದೊಡ್ಡ ಕರುಳು ಹಾಗೂ ಸಣ್ಣ ಕರುಳಿಗೆ ಬಿಡುವು ಅಗತ್ಯವಿರುತ್ತದೆ. ನಿತ್ಯ ನಿರಂತರ ಕೆಲಸ ಮಾಡುವ ಈ ಅಂಗಾಂಗಗಳು ಆಯಾಸಗೊಳ್ಳುತ್ತವೆ. 
ತಿಂಗಳಲ್ಲಿ ಎರಡು ಬಾರಿ ಉಪವಾಸ ಮಾಡಿ, ಆ ದಿನಗಳಂದು ಬಿಡುವು ನೀಡಿದರೆ, ಜೀರ್ಣಕ್ರಿಯೆ ಚುರುಕುಗೊಂಡು ನಮ್ಮ ಆರೋಗ್ಯ ಹೆಚ್ಚುತ್ತದೆ ಎನ್ನಲಾಗುತ್ತದೆ..

  ಹಾಗಾಗಿ  ಉಪವಾಸ(ಹತ್ತಿರ)ವಿದ್ದು ದೇವರನ್ನು ಸೇವಿಸಿ ಮಾನಸಿಕ ಶಕ್ತಿ ವೃದ್ಧಿಸಿಕೊಳ್ಳುವುದು ಜತೆಗೆ ಉಪವಾಸ(ಖಾಲಿ ಉದರ)ವಿದ್ದು ಆರೋಗ್ಯ ವೃದ್ಧಿಸಿಕೊಳ್ಳಬಹುದು. ಈ ಎರಡು ಕ್ರಿಯೆಗಳನ್ನು ಏಕಾದಶಿಯಂದು ಆಚರಿಸುವಂತೆ ಹಿರಿಯರು ಸಲಹೆ ಮಾಡಿದ್ದಾರೆ. ಈ ದಿನಕ್ಕೆ ಧಾರ್ಮಿಕ ಚೌಕಟ್ಟನ್ನು ಹಾಕಿ ದೈಹಿಕ ಸಬಲತೆಗೆ ಅನುವು ಮಾಡಿಕೊಟ್ಟಿದ್ದಾರೆ. ಆದ್ದರಿಂದ ಏಕಾದಶಿಗಳಂದು ಉಪವಾಸ ಮಾಡಿದರೆ ದೈಹಿಕ ಬಲ ಹಾಗೂ ಮಾನಸಿಕ ಸ್ಥೈರ್ಯ ಹೆಚ್ಚುತ್ತದೆ.

   ಇಂತಹ‌ ಏಕಾದಶಿಯಂದು ಏಕಾಗ್ರತೆಯೂ ಅಗತ್ಯ. ಅದಕ್ಕಾಗಿಯೇ ಈ ದಿನ ಸುಗಂಧ ದ್ರವ್ಯಗಳ ಬಳಕೆ ನಿಷೇಧಿಸಲಾಗಿದೆ. ಇಂದ್ರಿಯ ನಿಗ್ರಹಕ್ಕಾಗಿ ಇವುಗಳಿಂದ ದೂರ ಉಳಿಯಬೇಕು. ಸ್ವಯಂ ವ್ಯಕ್ತ ಕ್ಷೇತ್ರಗಳನ್ನು(ಬದರಿ, ತಿರುಪತಿ, ಶ್ರೀರಂಗಂ, ಅಯೋಧ್ಯಾ, ಪಂಢರಾಪುರ, ಉಡುಪಿ, ಕಟೀಲು, ಧರ್ಮಸ್ಥಳ, ಸುಬ್ರಹ್ಮಣ್ಯ, ಕೊಲ್ಲೂರು, ಮತ್ತಿತರ) ಹೊರತು ಪಡಿಸಿ ದೇವರ ಪೂಜೆಗೂ ಸುಗಂಧ ಪುಷ್ಪವನ್ನೂ ಸಹ ಬಳಸುವಂತಿಲ್ಲ.  (ಆದರೆ ಇದಕ್ಕೆ ಆಗಮಾನುಸಾರ ಕೆಲ ಅಪವಾದಗಳು ಉಂಟು).

 ಸಹಜವಾಗಿ ಸುಗಂಧ ದ್ರವ್ಯಗಳು ಮನಸ್ಸನ್ನು ವಿರೂಪಗೊಳಿಸುವುದೇ ಹೆಚ್ಚು. ಹಾಗಾಗಿ ನಿಷೇಧ ಹೇರಲಾಗಿದೆಯಷ್ಟೆ. ಅಂದರೆ ಭೋಗ ವರ್ಜಿಸಿ ಭಗವಂತನನ್ನು ಸೇವಿಸಬೇಕು, ಇದು ನಿಯಮ.
  ತಿಂಗಳಲ್ಲಿ ಶುಕ್ಲಪಕ್ಷ ಹಾಗೂ ಕೃಷ್ಣಪಕ್ಷದ ಹನ್ನೊಂದನೇ ದಿನ ಏಕಾದಶಿ ಆಚರಿಸಲಾಗುತ್ತದೆ. ಈ ದಿನ ಮಾತ್ರ ಉಪವಾಸ ಮಾಡಲಾಗುತ್ತದೆ.‌ “ಶರೀರಮಾಧ್ಯಂ ಖಲು ಧರ್ಮಸಾಧನಂ” ಎಂಬ ಮಹಾಕವಿ ಕಾಳಿದಾಸನ ವಚನದಂತೆ ಧರ್ಮ ಸಾಧನೆಗೆ, ಸ್ವಾಸ್ಥ ಶರೀರ ಅತ್ಯಗತ್ಯವಿದೆ. ಆದ್ದರಿಂದ ಸಾಧ್ಯವಾದ ಮಟ್ಟಿಗೆ ಹರಿದಿನ ಉಪವಾಸ ಮಾಡಿ ಆರೋಗ್ಯ ರೂಢಿಸಿಕೊಳ್ಳಬಹುದು. ಇದು ಎಲ್ಲರಿಗೂ ಕಡ್ಡಾಯವಲ್ಲ, ಆದರೆ ಆಚರಣೆಗೆ ಅಡ್ಡಿಯಿಲ್ಲ.

ಪುತ್ರದಾ(ವೈಕುಂಟ) ಏಕಾದಶಿ:

ಪದ್ಮ ಪುರಾಣದಲ್ಲಿ ಪುತ್ರದಾ(ವೈಕುಂಟ) ಏಕಾದಶಿಯ ಮಹತ್ವವನ್ನು ಉಲ್ಲೇಖಿಸಲಾಗಿದೆ. ಇದು ಏಕಾದಶಿಗಳಲ್ಲೇ ವಿಶೇಷವಾದ ಸ್ಥಾನ ಪಡೆದಿದೆ.
  ಆಷಾಢಮಾಸದಂದು ಬರುವ ಏಕಾದಶಿಗೆ ಪ್ರಥಮ(ಶಯನಿ) ಏಕಾದಶಿ ಎಂತಲೂ, ಪುಷ್ಯಮಾಸದ ಶುಕ್ಲಪಕ್ಷದಲ್ಲಿ ಬರುವ ಏಕಾದಶಿಗೆ ಪುತ್ರದಾ (ವೈಕುಂಠ) ಏಕಾದಶಿ ಎಂದು ಕರೆಯಲಾಗುತ್ತದೆ. ಶಯನಿ ಏಕಾದಶಿಯಂದು ಯೋಗನಿದ್ರೆಗೆ ಜಾರುವ ಶ್ರೀಹರಿ, ಉತ್ಥಾನ ದ್ವಾದಶಿಯಂದು ಎಚ್ಚರಗೊಳ್ಳುತ್ತಾನೆ.  ಒಮ್ಮೆ ಮುರಾಸುರ ಎಂಬ ರಾಕ್ಷಸ, ದೇವತೆಗಳಿಗೆ ಉಪಟಳ ನೀಡಿದ. ಇದನ್ನು  ಸಹಿಸದ ದೇವತೆಗಳು, ರುದ್ರದೇವರ ಮೊರೆ ಹೋದರು. ಮುರಾಸುರನ ಶಕ್ತಿ ಹಾಗೂ ಆತನಿಗಿದ್ದ ವರದ ಮಹಿಮೆ ಅರಿತ ಶಿವ ಕೈಚೆಲ್ಲಿ, ಶ್ರೀಮಹಾವಿಷ್ಣುವನ್ನು ಆಶ್ರಯಿಸುವಂತೆ ಸಲಹೆ ಮಾಡಿದ. ಅಲ್ಲಿಂದ ತೆರಳಿದ ದೇವತೆಗಳು ವೈಕುಂಟಕ್ಕೆ ಬಂದು ಅಲ್ಕಿ ವಿಷ್ಣುವಲ್ಲಿ ಪರಿಸ್ಥಿತಿಯನ್ನು ಅರಿಕೆ ಮಾಡಿಕೊಂಡರು.
ದೇವತೆಗಳ ಮಾತು ಕೇಳಿದ ಶ್ರೀಹರಿ ನಿಶ್ಚಿಂತೆಯಿಂದ ತೆರಳುವಂತೆ ಸೂಚಿಸಿ, ಬದರಿ ಸಮೀಪದ ಹೈಮಾವತಿ ಎಂಬ ಗುಹೆಯಲ್ಲಿ ಯೋಗನಿದ್ರೆಗೆ ಜಾರಿದ. ಆ ದಿನವೇ ಆಷಾಢಮಾಸದ 11ನೇ ದಿನ. ಯೋಗನಿದ್ರೆಯಿಂದ ಮೇಲೇಳುತ್ತಿದ್ದಂತೆ ಮುರಾಸುರನ ಆರ್ಭಟ ಕೇಳಿಸುತ್ತದೆ. ಕಣ್ತೆರೆದು ನೋಡಿದಾಗ, ತನ್ನದೇ ದೇಹದಿಂದ ಹೊರಟ ಸ್ತ್ರೀಶಕ್ತಿಯೊಂದು ರಾಕ್ಷಸನ ಜತೆ ಯುದ್ಧದಲ್ಲಿ ತಲ್ಲೀನವಾಗಿತ್ತು. ಕೊನೆಗೆ ಮೇಲುಗೈ ಸಾಧಿಸಿದ ಸ್ತ್ರೀಶಕ್ತಿ ಮುರನನ್ನು ಸಂಹರಿಸಿತು. ಇದರಿಂದ ಪ್ರಸನ್ನಗೊಂಡ ಶ್ರೀಹರಿ ಏನು ಬೇಕೋ ಕೇಳು ಎಂದಾಗ, ಸ್ವಾಮಿ ಇಂದು ಪುಷ್ಯಮಾಸದ ಹನ್ನೊಂದನೇ ದಿನ(ಏಕಾದಶಿ) ಹಾಗಾಗಿ ಈ ದಿನಕ್ಕೆ ಏಕಾದಶಿಯೆಂದೇ ಹೆಸರು ನೀಡಿ ಆಶೀರ್ವದಿಸಿ ಎಂದಿತು. ಕೂಡಲೇ ಮಹಾವಿಷ್ಣು ‘ಏಕಾದಶಿ’ ಎಂದು ಹೆಸರಿಟ್ಟಿದ್ದಲ್ಲದೆ, ಈ ದಿನ ಯಾರು ಉಪವಾಸ ಮಾಡಿ ನನ್ನನ್ನು ಅರ್ಚಿಸುತ್ತಾರೋ ಅವರಿಗೆ ಪುಣ್ಯ ಪ್ರಾಪ್ತವಾಗುತ್ತದೆ. ಅಲ್ಲದೇ ನೀನು ಮುರಾಸುರನನ್ನು ಸಂಹರಿಸಿದ್ದರಿಂದ ಈ ದಿನ ವೈಕುಂಟ ಏಕಾದಶಿಯಾಗಲಿ. ಆಚರಣೆ ಮಾಡುವವರಿಗೆ ವೈಕುಂಟ ಪ್ರಾಪ್ತಿಯಾಗಲಿ ಎಂದು ಅಭಯವಿತ್ತ.  ಅಂದಿನಿಂದ ವೈಕುಂಟ ಏಕಾದಶಿ ಆಚರಣೆಗೆ ಬಂದಿದೆ.
 ಇದರ ಜತೆ ಧರ್ಮಶಾಸ್ತ್ರದ ಪ್ರಕಾರ ಸ್ವರ್ಗದ ಬಾಗಿಲು ತೆರೆಯುತ್ತದೆ ಎಂಬ ನಂಬಿಕೆ ಶ್ರದ್ಧಾಳುಗಳಲ್ಲಿದೆ. ಸೂರ್ಯ ದಕ್ಷಿಣದಿಂದ ತನ್ನ ಪಥವನ್ನು ಉತ್ತರಕ್ಕೆ ಚಲಿಸುವ ಪರ್ವ ಕಾಲ ಇದಾಗಿದೆ.  ಇದಲ್ಲದೇ ದಕ್ಷಿಣ ದಿಕ್ಕಿಗೆ ಪಿತೃಲೋಕವಿದೆ. ದೇವರ ದರ್ಶನ ಪಡೆದು ಈ ದಿಕ್ಕಿನ ಬಾಗಿಲ ಪ್ರವೇಶ ಸೂಕ್ತವಲ್ಲ. ಮೇಲಾಗಿ  ಉತ್ತರಕ್ಕೆ ದೇವತೆಗಳ ಆವಾಸ ಸ್ಥಾನಗಳಾದ ಬದರಿ ಮತ್ತಿತರ ಪುಣ್ಯ ಕ್ಷೇತ್ರಗಳಿವೆ. ಹಾಗಾಗಿ ದೇವಾಲಯದಲ್ಲಿ ದೇವರ ದರ್ಶನದ ನಂತರ ಉತ್ತರ ದಿಕ್ಕಿನ ಬಾಗಿಲಲ್ಲಿ  ತೆರಳಿದರೆ ಸ್ವರ್ಗ ಪ್ರಾಪ್ತಿ ಎಂಬ ನಂಬಿಕೆ ಜನರದು.

  ಏಕಾದಶಿ ಆಚರಿಸುವ ಭಕ್ತರು,ಈ ದಿನ ಉಪವಾಸವಿದ್ದು ದೇವಾಲಯಗಳಲ್ಲಿ ಶ್ರೀಹರಿಯ ದರ್ಶನ ಪಡೆದು ಉತ್ತರ ದಿಕ್ಕನಲ್ಲಿ ಸಾಗುವುದು ಶ್ರೇಯಸ್ಕರ ಎನ್ನುತ್ತಾರೆ ಹಿರಿಯರು. ಹಾಗೇ, ದ್ವಾದಶಿ ದಿನ ಅರುಣೋದಯ ಕಾಲದಲ್ಲಿ ಪಾರಣೆ ಪೂಜೆ ನಡೆಸಬೇಕು. ಶ್ರೀಹರಿಯನ್ನು ಪೂಜಿಸಿ, ತೀರ್ಥ ಸೇವಿಸಿ ನಂತರ ಪ್ರಸಾದ(ಊಟ) ಸ್ವೀಕರಿಸಬಹುದು. ಇಲ್ಲಿಗೆ ಎರಡೂ ದಿನಗಳ ಪೂಜೆ ಮುಗಿದಂತಾಗುತ್ತದೆ.
 ಈ ಪರ್ವಕಾಲದಲ್ಲಿ ಶ್ರೀಹರಿಯನ್ನು ಅರ್ಚಿಸಿ ದೈಹಿಕ ಹಾಗೂ ಮಾನಸಿಕ ಸುಖವನ್ಬು ಪಡೆಯೋಣ.

 ಶ್ತೀಕೃಷ್ಣಾರ್ಪಣಮಸ್ತು...

 

ಶ್ರೀಶ ಚರಣ ಸೇವಕ:
ಕೆ.ವಿ.ಲಕ್ಷ್ಮೀನಾರಾಯಣಾಚಾರ್ಯ,

Publisher: ಕನ್ನಡ ನಾಡು | Kannada Naadu

Login to Give your comment
Powered by